Today: 26.Apr.2018

ಗಣಿನಾಡಿನಿಂದ ಕೋಟೆಗೆ ಶಿಫ್ಟ್ Featured

ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಶ್ರೀರಾಮುಲು ಕಣಕ್ಕೆ: ಬಿಜೆಪಿ ರಣತಂತ್ರ

09 Apr 2018 0 comment
(0 votes)
 

ಬೆಂಗಳೂರು: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ಕ್ಷೇತ್ರದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಬಿ.ಶ್ರೀರಾಮುಲು ಅವರಿಗೆ ಟಿಕೆಟ್‌ ನೀಡುವ ಮೂಲಕ, ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ (ಎಸ್‌.ಟಿ) ಮೀಸಲಾಗಿರುವ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಲು ಬಿಜೆಪಿ ರಣತಂತ್ರ ರೂಪಿಸಿದೆ.

 

ಸಂಸದರ ಪೈಕಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಮಾತ್ರ ಹುರಿಯಾಳನ್ನಾಗಿ ಮಾಡಲಾಗುತ್ತದೆ ಎಂದು ಪಕ್ಷದ ವರಿಷ್ಠರು ಈ ಹಿಂದೆ ಪ್ರಕಟಿಸಿದ್ದರು. ಕಮಲ ಪಕ್ಷ ಪ್ರಕಟಿಸಿದ 72 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಯಡಿಯೂರಪ್ಪ ಹಾಗೂ ಬಿ.ಶ್ರೀರಾಮುಲು ಹೆಸರುಗಳಿವೆ.

ರಾಮುಲು ಪ್ರಸ್ತುತ ಬಳ್ಳಾರಿ ಸಂಸದ. ಅವರು ಈ ಹಿಂದೆ ಬಳ್ಳಾರಿ ಗ್ರಾಮಾಂತರ (ಎಸ್‌.ಟಿ) ಕ್ಷೇತ್ರದ ಶಾಸಕರಾಗಿದ್ದರು. ರಣತಂತ್ರದ ಭಾಗವಾಗಿ ಈ ಸಲ ಅವರನ್ನು ಮೊಳಕಾಲ್ಮುರಿನಲ್ಲಿ ನಿಲ್ಲಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಮೀಸಲಾದ 15 ಕ್ಷೇತ್ರಗಳಿವೆ. ಈ ಪೈಕಿ ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲೇ ಏಳು ಕ್ಷೇತ್ರಗಳು (ಚಳ್ಳಕೆರೆ, ಜಗಳೂರು, ಸಂಡೂರು, ಸಿರಗುಪ್ಪ, ಕೂಡ್ಲಿಗಿ, ಕಂಪ್ಲಿ ಹಾಗೂ ಬಳ್ಳಾರಿ ಗ್ರಾಮಾಂತರ) ಇವೆ. ಶ್ರೀರಾಮುಲು ಬಳ್ಳಾರಿ ರೆಡ್ಡಿ ಸಹೋದರರ ಪರಮಾಪ್ತ. ಬಳ್ಳಾರಿ ಹಾಗೂ ಚಿತ್ರದುರ್ಗ ಜಿಲ್ಲೆಗಳ ಮಟ್ಟಿಗೆ ಅವರು ಪ್ರಭಾವಿ ನಾಯಕ. ಬಳ್ಳಾರಿ ಗಣಿ ಹಗರಣ ಬೆಳಕಿಗೆ ಬಂದ ಬಳಿಕ ರಾಮುಲು ಅವರು 2011ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಶಾಲಿಯಾಗಿದ್ದರು.

 

2013ರ ವಿಧಾನಸಭಾ ಚುನಾವಣೆಯಲ್ಲಿ ಶ್ರೀರಾಮುಲು ನೇತೃತ್ವದ ಬಿಎಸ್‌ಆರ್‌ ಪಕ್ಷದಿಂದ ಮೊಳಕಾಲ್ಮುರಿನಲ್ಲಿ ಸ್ಪರ್ಧಿಸಿದ್ದ ಎಸ್‌.ತಿಪ್ಪೇಸ್ವಾಮಿ ಜಯ ಗಳಿಸಿದ್ದರು.ಮೊಳಕಾಲ್ಮುರಿನಲ್ಲಿ ಶ್ರೀರಾಮುಲು ಅವರನ್ನು ಕಣಕ್ಕೆ ಇಳಿಸುವ ಯೋಜನೆಯ ಹಿಂದೆ ಜನಾರ್ದನ ರೆಡ್ಡಿ ತಂತ್ರ ಇದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ರೆಡ್ಡಿಗೆ, ಬಳ್ಳಾರಿ ಜಿಲ್ಲೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಅವರು ಗಡಿಯಲ್ಲಿರುವ ಮೊಳಕಾಲ್ಮುರು ತಾಲ್ಲೂಕಿಗೆ ವಾಸ್ತವ್ಯ ಬದಲಿಸಿದ್ದಾರೆ. ಪಟ್ಟಣದಲ್ಲಿ ದೊಡ್ಡ ಬಂಗಲೆ ಬಾಡಿಗೆಗೆ ಪಡೆದು ವಾಸ್ತವ್ಯ ಹೂಡಿದ್ದಾರೆ. ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅವರು ಪ್ರಚಾರ ನಡೆಸಲಿದ್ದಾರೆ. ರೆಡ್ಡಿ ಸಹೋದರ ಜಿ. ಸೋಮಶೇಖರ ರೆಡ್ಡಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದೂ ಹೇಳಿವೆ.

-ಕೃಪೆ : ಪ್ರಜಾವಾಣಿ

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: