Today: 22.Oct.2017

ಮಂಜು ಮೇಲೆ ಆರೋಪ Featured

 ಎ.ಮಂಜು ಅಕ್ರಮ ಸಂಪಾದನೆ ಮಾಡಲೊರಟಿದ್ದಾರೆ : ಎಟಿಆರ್ ಆರೋಪ.

08 Oct 2017 0 comment
(0 votes)
 

ಅರಕಲಗೂಡು: ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಯನ್ನು ನಿರ್ಲಕ್ಷ್ಯಿಸಿ ಚುನಾವಣೆಗಾಗಿ ಅಕ್ರಮ ಸಂಪಾದನೆಯಲ್ಲಿ ತೊಡಗಿದ್ದಾರೆ ಎಂದು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಆರೋಪಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶು ಸಂಗೋಪನೆ ಸಚಿವರ ಕ್ಷೇತ್ರದಲ್ಲಿಯೇ ಯೋಜನೆ ದುರಪಯೋಗವಾಗುತ್ತಿದ್ದು ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದೆ. ಹಣ ದಾಹದಿಂದ ಸಚಿವರ ಕ್ಷೇತ್ರದಲ್ಲಿ ಯೋಜನೆ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಅಕ್ರಮದಲ್ಲಿ ಅಧಿಕಾರಿಗಳ ಕೈವಾಡವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದ್ದ ಸಚಿವರು ಈಗ ಅವರ ವಿರುದ್ದವೇ ದೂರು ದಾಖಲಿಸುವ ಹುನ್ನಾರಕ್ಕೆ ಮುಂದಾಗಿದ್ದಾರೆ. ಚುನಾವಣೆ ಗಿಮ್ಮಿಕ್ ಮಾಡುವುದನ್ನು ಸಚಿವರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಮುದಗನೂರು ಕ್ರಷರ್‌ಗೆ ಗಣಿ ಮಂತ್ರಿ ವಿನಯ ಕುಲಕಣಿ ದಿಢೀರ್ ಭೇಟಿ ನೀಡಿದ್ದರ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿಲ್ಲವೇ. ಈ ಬಗ್ಗೆ ಅನುಮಾನವಿದ್ದು ತನಿಖೆ ಆಗಬೇಕು ಎಂದು ಆಗ್ರಹಿಸಿದರು.

ಕೋಟಿಗಟ್ಟಲೆ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಹಾಸನ- ಪಿರಿಯಾಪಟ್ಟಣ ಮಾರ್ಗದ ರಸ್ತೆ ಉದ್ಘಾಟನೆಗೂ ಮುನ್ನವೇ ಕಳಪೆಯಾಗಿ ಹಾಳಾಗುತ್ತಿದೆ. ಈ ಬಗ್ಗೆ ಸಚಿವರು ಗುತ್ತಿಗೆದಾರರನ್ನು ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ವಸತಿ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ. ಅಭಿವೃದ್ಧಿ ಹೆಸರಿನಲ್ಲಿ ಬಡವರನ್ನು ಸುಲಿಗೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸ್ಪಂದಿಸದೆ ಉದ್ಯಮಿಗಳನ್ನು ಬೆಂಬಲಿಸುತ್ತಿದೆ. ಹಾಗಾಗಿ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬೆಂಬಲಿಸಬೇಕು ಎಂದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆಲೂರು ಸಕಲೇಶಪುರ ಶಾಸಕ ಎಚ್.ಕೆ. ಕುಮಾರಸ್ವಾಮಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆಳ್ವಿಕೆಯಲ್ಲಿ ದಲಿತರ ಮೇಲಿನ ದೌರ್ಜನ್ಯ ಮಿತಿ ಮೀರಿದೆ. ಮುಂದಿನ ಚುನಾವಣೆಯಲ್ಲಿ ಜನರು ಮನೆಗೆ ಕಳಿಸುತ್ತಾರೆ ಎಂಬ ಭೀತಿಯಿಂದ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮ ಆಯೋಜಿಸಲಾಗಿದೆ. ಬಿಜೆಪಿ ಸೀರೆ ಹಂಚಿ ಜನರನ್ನು ಸೆಳೆಯಲು ಯತ್ನಿಸುತ್ತಿದ್ದರೆ ಕಾಂಗ್ರೆಸ್ ಕುಂಕುಮ ಭಾಗ್ಯ ನೀಡಿ ಜನರನ್ನು ಸೆಳೆಯಲು ನಾಟಕ ನಡೆಸುತ್ತಿವೆ.ಈ ಎರಡೂ ಪಕ್ಷಗಳನ್ನು ತಿರಸ್ಕರಿಸುವ ಮೂಲಕ ಜನರು ತಕ್ಕ ಪಾಠಕಲಿಸಬೇಕು ಎಂದರು.

ಜೆಡಿಎಸ್ ರೈತ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಜಿ. ರಾಮಚಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಲಿಂಗೇಶ್, ಹಾಸನ ತಾಪಂ ಅಧ್ಯಕ್ಷ ಸತೀಶ್, ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಸತೀಶ್ ಮಾತನಾಡಿದರು. ಜಿಪಂ ಉಪಾಧ್ಯಕ್ಷ ಎಚ್.ಪಿ. ಶ್ರೀನಿವಾಸ್, ಮುಖಂಡರಾದ ಸುರೇಶ್ ಕುಮಾರ್, ಮುದ್ದನಹಳ್ಳಿ ರಮೇಶ್, ದೇವೇಗೌಡ, ಪುಟ್ಟಸ್ವಾಮಪ್ಪ, ನರಸೇಗೌಡ, ಶಶಿಕುಮಾರ್, ಮೋಹನ್, ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು.

- ಕೊಂಡಿನ್ಯೂಸ್, ಅರಕಲಗೂಡು.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  good hits