Today: 17.Jan.2018

ಕಾಯಕಯೋಗಿ Featured

 ಈತ ಜನರ ರಕ್ಷಕನಷ್ಟೆಯಲ್ಲ; ಜಾನುವಾರು ರಕ್ಷಕ ಕೂಡಾ.

ಸರ್ಕಾರಿ ನೌಕರನನೊಬ್ಬನ ನಿಸ್ವಾರ್ಥ  ಸಾಮಾಜ ಸೇವೆ.

04 Dec 2017 0 comment
(0 votes)
 

ಈತ ಸರ್ಕಾರಿ ನೌಕರನಾಗಿದ್ರು ಕೂಡಾ ಸಮಾಜ ಸೇವೆಯಲ್ಲಿ ತನ್ನದೇ ಆದ ಕೊಡುಗೆಯನ್ನ ಜಿಲ್ಲೆಯ ಜನರಿಗಷ್ಟೆಯಲ್ಲದೇ ನಾಡಿನ ಜನರಿಗೂ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಅನಾಥರಿಗೆ ರಕ್ಷಣೆ ನೀಡುವ ಜೊತೆಗೆ ಅವರ ರಕ್ಷಕನಾಗಿ ತನ್ನ ಜೀವನ ಸವೆಸುತ್ತಿರುವ ಇವರು ಇಂದು ಮತ್ತೊಂದು ಮೈಲಿಗಲ್ಲನ್ನ ದಾಟುವ ಮೂಲಕ ಮಾತು ಬಾರದ ಮೂಕ ಕಂದಮ್ಮಗಳಿಗೂ ಆಶ್ರಯ ನೀಡಲು ಹೊರಟಿದ್ದಾರೆ. ಹಾಗಿದ್ರೆ ಯಾರಪ್ಪ ಅವರು ? ಎಲ್ಲಿದ್ದಾರೆ ಅಂತೀರಾ... ಈ ಸ್ಟೋರಿ ನೋಡಿ...

ವೇದಿಕೆಯಲ್ಲಿ ಮುಗ್ದತೆಯಿಂದ ಕುಳಿತಿರುವ ಈ ದಂಪತಿಯ ಹೆಸರು ವಿಜಯ ಮತ್ತು ನಾಗಣ್ಣ ಅಂತ. ಸದ್ಯ ಕಂದಾಯ ಇಲಾಖೆಯಲ್ಲಿ ಬಾಂದ್ ಜವಾನ್ ಆಗಿ ಕೆಲಸ ಮಾಡ್ತಿದ್ದಾರೆ. ಅಷ್ಟೆಯಲ್ಲ ಅಪ್ಪಟ ದೇಶಭಕ್ತ ಕೂಡಾ. ವಯಸ್ಸು 45 ದಾಟಿದ್ರು ನವ ಯುವಕರಿಗೇನು ಕಮ್ಮಿಯಿಲ್ಲ. ಹಿಡಿದ ಕೆಲಸವನ್ನ ಬೆಂಬಿಡದೇ ಸಾಧಿಸುವ ಛಲಗಾರ. ಆದ್ರೆ ದೇಶಕಾಯುವ ಕೆಲಸದಲ್ಲಿ ಮಾತ್ರ ಸೋತ ಇವರು ಮನಸ್ಸಿನಲ್ಲಿರುವ ಹುಮ್ಮಸ್ಸನ್ನ ಬಿಟ್ಟಿಲ್ಲ. ಸಾಧ್ಯವಾದ್ರೆ ಒಮ್ಮೆಯಾದ್ರು ದೇಶದ ಗಡಿಯನ್ನ ಕಾದು ಮಣ್ಣಿನ ಋಣವನ್ನ ತೀರಿಸಬೇಕೆಂಬ ಹಂಬಲವೊತ್ತ ಚಲಗಾರ. 15 ವರ್ಷಗಳ ಹಿಂದೆ ಸಣ್ಣದೊಂದು ಪೋಟೋ ಸ್ಟೂಡಿಯೋ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ ದೇಶಕಾಯುವ ವೀರಯೋಧರಿ, ಅಂಗವಿಕಲರಿಗೆ, ವಯೋವೃದ್ದರಿಗೆ, ಬಡಕುಟುಂಬ ಎಂದು ಗೊತ್ತಾದಾಗ ಹಣ ನೀಡಲು ಸಾಧ್ಯವಾಗದವರಿಗೆ ಉಚಿತ ಪೋಟೋ ತೆಗೆದು ಕೊಡುವ, ಕಾಯಕವನ್ನ ಮಾಡಿ ಸಮಾಜದಲ್ಲಿ ಗುರುತಿಸಿಕೊಂಡವರು.

ಬಳಿಕ ತನ್ನ ಮಾತೃ ಸಂಬಂಧಿಗಳು ಅಗಲಿದಾಗ ಈತನ ರೋಧನೆ ಮುಗಿಲು ಮುಟ್ಟಿತ್ತು. ಕಷ್ಟಪಟ್ಟು ಸಾಕಿ ಸಲುಹಿದ ಕೆಲ ಸಂಬಂಧಿಕರು ಕಣ್ಣೆದುರಲ್ಲಿಯೇ ಸಾವಿಗೀಡಾಗಿದ್ದರಿಂದ ಅವರ ಸೇವೆ ಮಾಡುವ ಭಾಗ್ಯ ಸಿಗಲಿಲ್ಲವೆಂಬ ಕೊರಗು ಕಾಡಿತಂತೆ. ಅಂದು ತೆಗೆದುಕೊಂಡ ಒಂದು ನಿರ್ಧಾರ ತನ್ನ ಜೀವನದ ದಿಕ್ಕನ್ನೆ ಬದಲಿಸಿತು. ಕಳೆದ 10 ವರ್ಷಗಳ ಹಿಂದೆ ವಂದೇ ಮಾತರಂ ಎಂಬ ಸೇವಾ ಸಂಸ್ಥೆಯೊಂದನ್ನ ಪ್ರಾರಂಬಿಸಿದ್ರು. ಅದರಡಿಯಲ್ಲಿ ಮಾತ ಪಿತೃಗಳ, ಮಣ್ಣಿನ ಋಣವನ್ನ ತೀರಿಸಲು ಮಾತೃಭೂಮಿ ಉಚಿತ ವೃದ್ದಾಶ್ರಮವನ್ನ ಪ್ರಾರಂಭಿಸಿದ್ರು. ಪ್ರಾರಂಭದ ಸಮಯದಲ್ಲಿ ಸರ್ಕಾರಿ ನೌಕರನಾದ ನಿನಗೇನು ಬಂತು..ರೋಗ, ಸರ್ಕಾರದ ಸಂಬಳ ಪಡೆದು ಹೆಂಡತಿ ಮಕ್ಕಳನ್ನ ಸುಖವಾಗಿಟ್ಟುಕೊಳ್ಳದೇ ಎಂಬ ನಾನಾ ಚುಚ್ಚುಮಾತುಗಳ ಬಂದ್ರು ದೃತಿಗೆಡದೇ, ಅಂದುಕೊಂಡಂತೆ ವೃದ್ದಾಶ್ರಮದಲ್ಲಿ ಒಂದೊಂದೆ ಹೆಜ್ಜೆಗಳನ್ನ ಇಡುತ್ತಾ 10 ವರ್ಷವನ್ನ ಪೂರೈಸಿ ಇಂದು 60ಕ್ಕೂ ಹೆಚ್ಚು ವೃದ್ದರಿಗೆ ಆಶ್ರಯದಾತನಾಗಿದ್ದಾರೆ. ಇಂತಹ ಕಾರ್ಯಕ್ಕೆ ಮನೆಯವರೆ ಒಂದು ಕಾಲದಲ್ಲಿ ಅಪ್ಪನ ಕೆಲಸಕ್ಕೆ ಮೂಗು ಮುರಿಯುತ್ತಿದ್ದವರು ತಮಗರಿವಿಲ್ಲದೇ ಮನೆ ಮಂದಿಯಲ್ಲಾ ತನ್ನ ಮನೆಯನ್ನ ಬಿಟ್ಟು ವಯೋವೃದ್ದರ ಆರೈಕೆ ಮಾಡ್ತಿದ್ದಾರೆ. ಯಾವುದೇ ಸರ್ಕಾರ ಸೌಲಭ್ಯವನ್ನ ಪಡೆಯದೆ ಇಡೀ ಕುಟುಂಬವೇ ಸಮಾಜ ಸೇವೆಯಲ್ಲಿ ತೊಡಗಿದೆ.

ಇಂತಹ ಕಾಯಕಯೋಗಿಗೆ ಕಳೆದ ನಾಲ್ಕು ವರ್ಷಗಳಿಂದ ಕಂಡದ್ದು ಜಿಲ್ಲೆಯ ಅತೀವ ಬರಗಾಲ. ಮಾನವನಿಗೆ ಕುಡಿಯೋಕೆ ನೀರು ಸಿಕ್ತಿಲ್ಲ. ಮೂಕ ಪ್ರಾಣಿಗಳು ಹೇಗೆ ಜೀವಿಸುತ್ತಿವೆ. ಆ ಜೀವಿಗಳಿಗೆ ಏನಾದ್ರು ನನ್ನ ಕಡೆಯಿಂದ ನೆಲೆ ಸಿಗುವಂತೆ ಮಾಡಬೇಕೆಂಬ ಹೆಬ್ಬಯಕೆಯಿಂದ ತನ್ನ ಮಗ ವಿಕ್ರಂ ಸಹಾಯ ಪಡೆದು ಗೋ-ಶಾಲೆಯೊಂದನ್ನ ತೆರೆಯಲು ಚಿಂತನೆ ನಡೆಸಿದ್ರು. ಇಂತಹ ಸಂದರ್ಭದಲ್ಲಿ ಪಟ್ಟಣದ ವೆಂಕಟೇಶ್ ಕುಟುಂಬ ಇವರಿಗೆ 2.5 ಎಕರೆ ತೋಟವನ್ನ ಗೋಶಾಲೆ ನಡೆಸಲು ಬಿಟ್ಟುಕೊಟ್ಟಿದೆ. ಇಂದು ನಡೆದ ಗೋಶಾಲೆ ಪ್ರಾರಂಭೋತ್ಸವದಲ್ಲಿ ಉಚಿತ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿದ್ದು ಮತ್ತೊಂದು ವಿಶೇಷವಾಗಿತ್ತು.

ಇವರ ಸೇವೆಯನ್ನ ಗುರುತಿಸಿ ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊಂದು ಆಂಬ್ಯುಲೆನ್ಸ್ ನ್ನ ಕೊಡುಗೆಯಾಗಿ ನೀಡಿದೆ. ಅದನ್ನ ಕೂಡಾ ನಿರ್ಗತಿಕರರ ಸೇವೆಗಾಗಿ ಮೀಸಲಿಟ್ಟಿದ್ದಾರೆ. ಮುಂಜಾನೆಯಿಂದ ವೃದ್ದಾಶ್ರಮದಲ್ಲಿ ಕಾಯಕ ಮಾಡಿ ಮತ್ತೆ ಸರ್ಕಾರದ ಕೆಲಸಕ್ಕೆ ಹಾಜರಾಗುವ ಇವರು ಸರ್ಕಾರದ ಕೆಲಸ ಮುಗಿಯುತ್ತಿದ್ದಂತೆ ಮತ್ತೆ ಸಮಾಜ ಸೇವೆಯತ್ತ ಮುಖ ಮಾಡ್ತಾರೆ. ಇವರ ಈ ಕಾರ್ಯಕ್ಕೆ ಸರ್ಕಾರವಷ್ಟೆಯಲ್ಲದೇ, ಹಲವು ಸಂಘ ಸಂಸ್ಥೆಗಳು, ಮಾಧ್ಯಮಗಳು ಕೂಡಾ ಗುರುತಿಸಿ ಸನ್ಮಾನಿಸಿವೆ. ಇವರ ಈ ಸೇವೆಯಿಂದ ಪ್ರೇರೆಪಿತರಾದ ಕುಟುಂಬದ ಹೆಂಡತಿ ಮಕ್ಕಳು ಕೂಡಾ ಇದೇ ಕಾಯಕದ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿರುವುದು ಮತ್ತೊಂದು ಹೆಗ್ಗಳಿಕೆ. ಮಾತಿನಲ್ಲಿ ಹೇಳುವುದು ಸುಲಭ, ಆದ್ರೆ ಕೃತಿಯಲ್ಲಿ ತೋರ್ಪಡಿಸುವುದು ಕಷ್ಟದ ಕೆಲಸ. ಇಂತಹ ಕಾಯಕಯೋಗಿಯನ್ನ ವೇದಿಯಲ್ಲಿ ಸ್ಥಳೀಯ ಶಾಸಕ ಕೊಂಡಾಡಿದ್ದಷ್ಟೆಯಲ್ಲದೇ ಮುಂದಿನ ದಿನದಲ್ಲಿ ತಾಲ್ಲೂಕಿನಲ್ಲಿರುವ ಸರ್ಕಾರಿ ಗೋಮಾಳವೊಂದನ್ನ ಗುರುತಿಸಿ ಸಂಸ್ಥೆಗೆ ನೀಡುವ ಭರವಸೆಯನ್ನ ಕೂಡಾ ನೀಡಿದ್ದು ಕುಟುಂಬಕ್ಕೆ ಮತ್ತಷ್ಟು ಸಂತೋಷವನ್ನ ತಂದುಕೊಟ್ಟಿದೆ.

ಕಷ್ಟವನುಂಡವನಿಗೆ ಮಾತ್ರ ಗೊತ್ತಾಗುತ್ತೆ ಮತ್ತೊಬ್ಬನ ಹಸಿವನ ಸಂಕಟ ಎಂಬ ಗಾದೆ ಮಾತಿದೆ. ಇಂದು ನಾವು ಹೆಂಡತಿ, ಮಕ್ಕಳ ಜೊತೆಗೆ ಹತ್ತವರನ್ನೇ ಸಾಕುವುದು ಕಷ್ಟದ ಕೆಲಸ. ಅಂತಹುದರಲ್ಲಿ ಈ ಕುಟುಂಬ ಸಂಸಾರದ ಸುಖವನ್ನೇ ತ್ಯಾಗ ಮಾಡಿ ನಿರ್ಗತಿಕರ ಪಾಲಿಗೆ ಆಶಾಕಿರಣವಾಗಿದ್ದಾರೆ. ಜನರಿಗೆ ಮಾತ್ರವಲ್ಲದೇ ಜಾನುವಾರುಗಳಿಗೆ ಆಶ್ರಯದಾತನಾಗುವ ಮೂಲಕ ಹೊಸದೊಂದು ಸಮಾಜ ಸೇವೆಗೆ ಮುನ್ನುಡಿ ಬರೆದಿರುವ ಜೈಹಿಂದ್ ನಾಗಣ್ಣನ ಕುಟುಂಬದವರ ಈ ಕಾರ್ಯಕ್ಕೆ ಜನರ ಬೆಂಬಲ ಬೇಕಿದೆ. ಇಂತಹ "ಬಂಗಾರದ ಕುಟುಂಬ" ದ ಸೇವೆಗೆ ನಿಸ್ವಾರ್ಥ ಸೇವೆಯ ಹಾದಿ ಸಮಾಜಮುಖಿಯಾಗಿರಲಿ ಎಂಬುದು ನಮ್ಮ ಕೊಂಡಿ ನ್ಯೂಸ್.ಕಾಂ ಆಶಯ.

  • ಆನಂದ್ ಚನ್ನಹಳ್ಳಿ, ಹಾಸನ.
Last modified on Monday, 04 December 2017 20:10
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters