Today: 17.Jan.2018

ಬೆಂಕಿ ಕಾವಲು Featured

ಆನೆ ಹಾವಳಿಯ ಉಪಟಳಕ್ಕೆ ಬೆಂಕಿ ಕಾವಲಿನ ಮೊರೆಯೊದ ರೈತರು : ಎರಡು ಆನೆಗಳನ್ನ ಹಿಡಿಯಲು ಮುಂದಾದ ಅರಣ್ಯ ಇಲಾಖೆ 

07 Dec 2017 0 comment
(0 votes)
 

= = = EXCLUSIVE STORY = = =

ಹಾಸನ: 07.12.2017: ಹಾಸನ ಕೇವಲ ಶಿಲ್ವಕಲೆಗಳ ನಾಡು, ಗೊಮ್ಮಟನ ಬೀಡು ಎಂದು ಹೇಳ್ತಿದ್ದ ನಾವುಗಳು ಇಂದು ಆನೆಗಳ ನೆಲೆಬೀಡು ಎಂದೇಳುವ ಪರಿಸ್ಥಿತಿ ಬಂದಿದೆ ನೋಡಿ..ಕಾರಣ ಕಳೆದ ಇತ್ತೀಚಿನ ದಿನದಲ್ಲಿ ಆನೆ ಹಾವಳಿ ಹೆಚ್ಚಾಗಿದ್ದು, ಜನರನ್ನ ಭಯಭೀತರನ್ನಾಗಿಸಿದೆ. ಹಾಗಿದ್ರೆ ಹಾಸನದಲ್ಲಿ ಎಷ್ಟು ಆನೆಗಳಿವೆ ? ಯಾಕಾದ್ರು ಬರ್ತಿವೆ ಅಂತೀರಾ ಈ ಸ್ಟೋರಿ ನೋಡಿ...

ಡಿ.6ರಂದು ನಡೆದ ಘಟನೆ ನಿಜಕ್ಕೂ ಮನಸ್ಸಿಗೆ ನೋವಾಗುತ್ತೆ. ಹೊಂಕರವಳ್ಳಿ ಗ್ರಾಮದ ಯೋಗೇಶ್ ಎಂಬಾತನನ್ನ ಬರ್ಬರವಾಗಿ ಕೊಲೆಗೈದ ಒಂಟಿ ಸಲಗದಿಂದ ಮತ್ತೆ ಸಕಲೇಶಪುರ ಜನತೆ ಬೆಚ್ಚಿ ಬಿದ್ದಿದ್ದಾರೆ. ವಾಸ ಮಾಡೋದು ಕಷ್ಟ ಅಂತ ಊರನ್ನೆ ಬಿಟ್ಟು ಹೋಗುವ ನಿರ್ಧಾರವನ್ನ ಮಾಡ್ತಿದ್ದಾರೆ ಈ ಭಾಗದ ಜನತೆ. ಯೋಗೇಶ್ ಸಾವಿನ ಬಳಿಕ ಮತ್ತೆ ಅದೇ ಗ್ರಾಮದಲ್ಲಿ ಇಂದು ಅದೇ ಕಾಡಾನೆ ರಾಜರೋಷವಾಗಿ ಓಡಾಡುತ್ತಿರುವುದನ್ನ ನೋಡಿದ್ರೆ ಮತ್ತೆ ಸಾವಿಗೆ ನಾವು ಹತ್ತಿರವಾಗಿ ಬಿಟ್ಟಿದ್ದೇವಲ್ಲಪ್ಪ ಅಂತ ಜನ್ರು ಮನಸ್ಸಲ್ಲಿಯೇ ಅಳಲು ತೋಡಿಕೊಳ್ಳುತ್ತಿದ್ದಾರೆ.  

2013-14ರಲ್ಲಿ ಸುಪ್ರೀಂ ಕೋರ್ಟ್ ಆದೇಶದನ್ವಯ ಸುಮಾರು 25 ಆನೆಗಳನ್ನ ಹಿಡಿಯಲಾಗಿತ್ತು. ಮತ್ತು ಅವುಗಳನ್ನ ಕೊಡಗು, ಮೈಸೂರು, ಚಾಮರಾಜನಗರದ ಆನೆ ಶಿಬಿರಕ್ಕೆ ಸ್ಥಳಾಂತರಿಸಲಾಗಿತ್ತು. ಬಳಿಕ 2017ರಲ್ಲಿ ಮತ್ತೆ ಸರ್ಕಾರದ ಆದೇಶದನ್ವಯ ಒಂದು ಒಂಟಿ ಸಲಗವನ್ನ ಹಿಡಿಯುವ ಮೂಲಕ ಆನೆಯನ್ನ ಬಂಡಿಪುರಕ್ಕೆ ರವಾನಿಸಲಾಗಿತ್ತು. ಅದ್ಯಾಕೋ ಗೊತ್ತಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿಂದ ಆನೆ ಸಂತತಿ ಹೆಚ್ಚಾಗಿವೆ ಅನ್ನಿಸ್ತಿದೆ. ಸಕಲೇಶಪುರದ ಹಲವೆಡೆ ಆನೆಗಳು ಹಿಂಡು ಹಿಂಡಾಗಿ ಓಡಾಡ್ತಿರೋದನ್ನ ನೋಡಿದ್ರೆ 70-80 ಆನೆಗಳಿವೆ ಎಂದು ತಾಲ್ಲೂಕಿನ ಜನತೆ ಹೇಳ್ತಾರೆ. ಆದ್ರೆ ಅರಣ್ಯ ಇಲಾಖೆ ಮಾತ್ರ 35-40 ಆನೆಗಳು ಮಾತ್ರ ಇವೆ ಅಂತ ಹೇಳ್ತಿದ್ದಾರೆ. ಕಾಡಿನಲ್ಲಿ ಆನೆಗಳಿಗೆ ಬೇಕಾದ ಬೈನೆ, ಬಿದಿರು, ಹಲಸು, ಮುಂತಾದವುಗಳು ಕಣ್ಮರೆಯಾಗುತ್ತಿವೆ. ನೀರಿನ ಕೊರತೆಯೂ ಕಾಡುತ್ತಿರುವುದುರಿಂದ ಆನೆಗಳು ನಾಡಿನತ್ತ ಮುಖ ಮಾಡ್ತಿವೆ.

ಹೆತ್ತೂರು, ಹೊಂಕರವಳ್ಳಿ, ಯಸಳೂರು, ಆಲೂರು, ಕೆಂಚಮ್ಮನ ಹೊಸಕೋಟೆ, ಮುಂತಾದ ಭಾಗದಲ್ಲಿ ಆನೆಗಳ ಹಾವಳಿ ಹೆಚ್ಚಾಗುತ್ತಿವೆ. ಪ್ರತಿನಿತ್ಯ ರೈತನ ಬೆಳೆಗೆ ದಾಳಿಯಿಟ್ಟು ಕೈಗೆ ಬಂದ ಫಸಲನ್ನ ನೆಲಸಮ ಮಾಡ್ತಿವೆ. ಭತ್ತದ ಗದ್ದೆಗಳಿಗೆ ಲಗ್ಗೆಯನ್ನಿಟ್ಟು ತುತ್ತಿಗಾಗಿ ಬೆಳೆದವನ ಬಾಯಿಗೆ ಮಣ್ಣಾಕುತ್ತಿವೆ ಕಾಡಾನೆಗಳು. ಇದ್ರಿಂದ ಪಾರಾಗಲು ಈ ಭಾಗದ ಜನರು ರಾತ್ರಿಯೆಲ್ಲಾ ಕಾಡಂಚಿನ ಪ್ರದೇಶದ ಸುತ್ತಲು ಬೆಂಕಿಯನ್ನ ಹಾಕಿ ರಾತ್ರಿಯಲ್ಲ ಕಾವಲು ಕಾಯ್ತಿದ್ದಾರೆ. ಇನ್ನು ಹೆತ್ತೂರು ಭಾಗದ ಕಾಡಂಚಿನಲ್ಲಿ ಬೆಂಕಿ ಹಾಕಿ ಕಾಯುವುದು ನಿತ್ಯದ ಕೆಲಸವಾಗಿದೆ. ಮಕ್ಕಳುಗಳನ್ನ ಜಾನುವಾರು ಹಿಡಿದುಕೊಂಡು ಬರುವಂತೆ ಕಳಿಸುವುದುದಕ್ಕೂ ಹೆದರುತ್ತಿದ್ದಾರೆ ಈ ಮಂದಿ.

ಆನೆಗಳ ಉಪಟಳಕ್ಕೆ ಯಾವ ಸರ್ಕಾರಗಳು ಶಾಸ್ವತ ಪರಿಹಾರ ಕಂಡುಹಿಡಿಯುವ ಪ್ರಯತ್ನ ಮಾಡದಿರುವುದು ಬೇಸರದ ಸಂಗತಿ. ಅದೇನೋ ಗೊತ್ತಿಲ್ಲ. ಕಳೆದ ಚುನಾವಣೆಯಲ್ಲಿ ಹೆಚ್ಚಾಗಿ ಕಂಡು ಬಂದಿದ್ದ ಆನೆಗಳು ಈ ಚುನಾವಣೆಯಲ್ಲಿ ಕಂಡು ಬರ್ತಿರೋದು ಕಾಕತಾಳಿಯವೆಂಬಂತೆ ಕಾಣುತ್ತಿದೆ. ಕೆಲವು ರಾಜಕಾರಿಗಳಿಗೆ ಆನೆಯ ವಿಚಾರವನ್ನ ಹಿಡಿದು ಸರ್ಕಾರ ವಿರುದ್ದ ಹರಿಯಾಯುತ್ತಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ನೆನ್ನೆ ಕೂಡಾ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಆನೆ ಕಾರಿಡಾರ್ ಮಾಡುವಂತೆ ಸದಾನಂದಗೌರನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಪರಿಹಾರದ ಹಣಕ್ಕಾಗಿ ಸರ್ಕಾರ ಮತ್ತು ರೈತರ ನಡುವೆ ಹಗ್ಗ ಜಗ್ಗಾಟ ನಡೆಯುತ್ತಿದೆ. ಕಾರಿಡಾರ್ ಆದ್ರೆ ಸಕಲೇಶಪುರದ ಭಾಗದಲ್ಲಿ ಆನೆ ಹಾವಳಿ ಕಡಿಮೆಯಾಗುವ ಸಾಧ್ಯತೆಯಿದೆ. ಆದ್ರೆ ಸದ್ಯ ಭರತ್ತೂರು ಬಳಿ ಆನೆ ಶಿಬಿರವನ್ನ ಮಾಡಿ ತಾತ್ಕಾಲಿಕವಾಗಿ ಆನೆ ಆನೆಗಳನ್ನ ತಪ್ಪಿಸುವ ಪ್ರಯತ್ನ ಮಾಡ್ತಿದೆ ಅರಣ್ಯ ಇಲಾಖೆ. ಇನ್ನು ಸರ್ಕಾರದ ನಿರ್ದೇಶನದಂತೆ ಆಲೂರು ಮತ್ತು ಸಕಲೇಶಪುರದ ಭಾಗದಲ್ಲಿ ನಿದ್ದೆಗೆಡಿಸಿರುವ ಎರಡು ಪುಂಡಾನೆಗಳನ್ನ ಹಿಡಿಯಲು ಅರಣ್ಯ ಇಲಾಖೆ ಸಜ್ಜಾಗಿದ್ದು, ನಾಳೆಯಿಂದ ಹಾಲೇಬೇಲೂರು ಗ್ರಾಮದಿಂದ ಕಾರ್ಯಚರಣೆ ಪ್ರಾರಂಬಿಸಲಿದೆ.

ಒಟ್ಟಾರೆ ಆನೆ ಮತ್ತು ಮಾನವನ ಸಂಘರ್ಷ ಇಂದು ನೆನ್ನೆಯದಲ್ಲ. ಕಳೆದ 2 ದಶಕಗಳಿಂದಲೂ ಸಮಸ್ಯೆಯಿದ್ರು, ಶಾಶ್ವತ ಪರಿಹಾರ ಮಾತ್ರ ಕಂಡುಹಿಡಿಯುವಲ್ಲಿ ಸರ್ಕಾರಗಳು ವಿಫಲವಾಗಿವೆ. ಮುಂದಿನ ದಿನದಲ್ಲಿ ಆನೆ ಕಾರಿಡಾರ ಮಾಡುವ ಮೂಲಕ ಸಮಸ್ಯೆಗೆ ಅಲ್ಪವಿರಾಮವನ್ನ ಹಾಕುವ ಮನಸ್ಸು ಮಾಡಿ ಆ ಭಾಗದ ಜನರಿಗೆ ನೆಮ್ಮದಿಯನ್ನ ನೀಡುವಲ್ಲಿ ಸರ್ಕಾರ ಸಫಲತೆ ಕಾಣುತ್ತಾ ಕಾದು ನೋಡಬೇಕಿದೆ.

- ನೇತ್ರಾ ಆನಂದ್, ಕೊಂಡಿನ್ಯೂಸ್, ಹಾಸನ.

Last modified on Friday, 08 December 2017 11:45
Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು:  webs counters