Today: 16.Oct.2018

ಮಠದ ಬೆಳಕು

  'ಭಟ್ಟಾರಕ' ಎಂಬ ಮಠದ ಬೆಳಕು.

16 Feb 2018 0 comment
(0 votes)
 

ಶ್ರವಣಬೆಳಗೊಳ: ವಿಶ್ವತೀರ್ಥ ಶ್ರವಣಬೆಳಗೊಳ ಕ್ಷೇತ್ರ ಶ್ರುತಕೇವಲಿ ಭದ್ರಬಾಹು ಮುನಿ, ಚಂದ್ರಗುಪ್ತ ಮುನಿ ಮತ್ತು ಸಹಸ್ರಾರು ತ್ಯಾಗಿಗಳ ತಪೋಭೂಮಿ ಹಾಗೂ ಬಾಹುಬಲಿ ಮೂರ್ತಿಯಿಂದಲೂ ವಿಶ್ವವಿಖ್ಯಾತಿ ಪಡೆದಿದೆ. ಈ ಕ್ಷೇತ್ರದ ಸಂರಕ್ಷಣೆಗಾಗಿ 1,037 ವರ್ಷಗಳ ಹಿಂದೆ ವಿಂಧ್ಯಗಿರಿಯ ಮೇಲೆ ಬಾಹುಬಲಿ ಮೂರ್ತಿ ಪ್ರತಿಷ್ಠಾಪನಾ ಮಹೋತ್ಸವ ನೆರವೇರಿಸಿದ ಗಂಗರ ಪ್ರಧಾನ ಮಂತ್ರಿ ಚಾವುಂಡರಾಯನ ಗುರು ನೇಮಿಚಂದ್ರ ಸಿದ್ಧಾಂತಚಕ್ರವರ್ತಿ ಅವರು ಕ್ಷೇತ್ರದ ಪ್ರಥಮ ಪೀಠಾಧ್ಯಕ್ಷರಾಗಿ ಧರ್ಮಪ್ರಭಾವನೆ ಮಾಡಿದರು.

ಕ್ಷೇತ್ರದ ಇತಿಹಾಸದಲ್ಲಿ ಶುಭಚಂದ್ರಾಚಾರ್ಯರಂತಹ ಅನೇಕ ತಪಸ್ವಿಗಳು ಗುರುಪೀಠ ಅಲಂಕರಿಸಿ ತಮ್ಮ ವಿದ್ಯೆ, ತಪಶಕ್ತಿ, ಮಂತ್ರ ಪ್ರಭಾವದಿಂದ ಸಮಾಜದ ಉದ್ಧಾರಕ್ಕೆ ಕಾರಣವಾಗಿ ಜೈನಧರ್ಮದ ಹಿರಿಮೆ, ಗರಿಮೆ ಪ್ರಸಾರ ಮಾಡಿದರು. ಹೀಗೆ ನಿರಂತರವಾಗಿ ನಡೆದು ಬಂದ ಗುರುಪೀಠದ ಇತಿಹಾಸದಲ್ಲಿ 20ನೇ ಶತಮಾನದ ಭಟ್ಟಾರಕ ಪರಂಪರೆಯಲ್ಲಿ ಮೊದಲು ಶಾಂತಿರಾಜ ಸ್ವಾಮಿ ಪಟ್ಟವೇರಿ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳಾದರು. ಇವರು ತಮಿಳುನಾಡಿನವರಾಗಿದ್ದು, ಮಹಾಪಂಡಿತರು, ವಿದ್ವಾಂಸಕರಿಗೆ ಪೋಷಕರೂ ಆಗಿದ್ದರು. ಪ್ರತಿಷ್ಠಾ ಚಾರ್ಯರಾಗಿ ಅನೇಕ ಪಂಚಕಲ್ಯಾಣ ನೆರವೇರಿಸಿ ಪ್ರಸಿದ್ಧರಾದ ಇವರು ಸಂಸ್ಕೃತ ಪಾಠಶಾಲೆಯನ್ನೂ ಸ್ಥಾಪಿಸಿದರು. ವಿದ್ಯಾರ್ಥಿನಿಲಯದ ಸ್ಥಾಪನೆ ಮಾಡಿ ಕ್ರಿ.ಶ.1910ರಲ್ಲಿ ಬಾಹುಬಲಿಗೆ 20ನೇ ಶತಮಾನದ ಪ್ರಥಮ ಮಹಾಮಸ್ತಕಾಭಿಷೇಕ ನೆರವೇರಿಸಿದರು. 

ಇವರ ನಂತರ ಪೀಠಾರೋಹಣ ಮಾಡಿದ ತಮಿಳುನಾಡಿನ ಶೆಲ್ವರಸು ಸ್ವಾಮಿಗಳು ಪ್ರಖ್ಯಾತ ಪಂಡಿತರಾಗಿದ್ದು, ಆಚಾರ್ಯ ಶಾಂತಿಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ಕ್ರಿ.ಶ.1925ರಲ್ಲಿ ಮಹಾಮಸ್ತಕಾಭಿಷೇಕ ನೆರವೇರಿಸಿದರು. ನಂತರ ನೇಮಿಸಾಗರ ವರ್ಣಿಯವರು ಪಟ್ಟಾಭಿಶಕ್ತರಾಗಿ ಧರ್ಮ ಪ್ರಭಾವನೆ ಮಾಡಿದರು. ಇವರು ತುಳುನಾಡಿನವರಾಗಿದ್ದು, ಅಬಾಲ ಬ್ರಹ್ಮಚಾರಿಗಳಾಗಿದ್ದವರು. ಶ್ರೀಮದಭಿನವ ಚಾರುಕೀರ್ತಿಗಳೆಂದು ಶುಭ ನಾಮಾವಳಿ ಪಡೆದವರಾಗಿದ್ದರು. ಇವರ ಕಾಲದಲ್ಲಿ ಭವ್ಯವಾದ ಧರ್ಮಶಾಲೆ ಹಾಗೂ ಶ್ರೀಮಠದ ಹಿಂಭಾಗದಲ್ಲಿ ಅಡುಗೆ ಮನೆ ನಿರ್ಮಾಣವಾಯಿತು. ಕ್ರಿ.ಶ.1940ರಲ್ಲಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಿಸಿದರು.

ನೇಮಿಸಾಗರ ವರ್ಣಿಯವರ ನಂತರ ಭಟ್ಟಾಕಲಂಕ ಸ್ವಾಮಿ ಅವರು ಕ್ರಿ.ಶ 1947ರಲ್ಲಿ ಗುರುಪೀಠದ ಪೀಠಾಧಿಪತಿಗಳಾದರು. ಗುರು ಪೀಠದ ಪರಂಪರೆಯಂತೆ ಪೀಠಾರೋ ಹಣವಾದಾಗಿನಿಂದ ಚಾರುಕೀರ್ತಿ ಪಂಡಿತಾಚಾರ್ಯವರ್ಯರೆಂಬ ಶುಭ ನಾಮದಿಂದಲೇ ಪ್ರಖ್ಯಾತಿ ಹೊಂದಿದರು. ಇವರು ಶಿವಮೊಗ್ಗ ಜಿಲ್ಲೆ ಕಟ್ಟಿನಕಾರಿನವರಾ ಗಿದ್ದು, ಜೈನಾಗಮ ಜ್ಯೋತಿಷಶಾಸ್ತ್ರ ಪಂಡಿತರಾಗಿದ್ದರು. ಕ್ಷೇತ್ರದಲ್ಲಿ ರಾಜಶ್ರೀ ಅತಿಥಿ ಗೃಹ, ಶ್ರೀಮಠದ ಪಕ್ಕದಲ್ಲಿ ಮೋತಿಖಾನೆ ಕಟ್ಟಡ, ವಿಂಧ್ಯಗಿರಿ ಬಾಹುಬಲಿ ಬೆಟ್ಟದ ಬುಡದಲ್ಲಿ ಯಾತ್ರಿಕರಿಗಾಗಿ ವಿಶ್ರಾಂತಿ ಗೃಹಗಳನ್ನು ಭಕ್ತರ ಸಹಕಾರದಿಂದ ನಿರ್ಮಿಸಿದರು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ 22 ವರ್ಷ ನಿರಂತರವಾಗಿ ಶ್ರಮಿಸಿದ ಶ್ರೀಗಳು, ಕ್ರಿ.ಶ.1953 ಮತ್ತು 1967 ರಲ್ಲಿ ಬಾಹುಬಲಿ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಿಸಿದರು.  

ಮೂರು ಮಸ್ತಕಾಭಿಷೇಕದ ರೂವಾರಿ : 1970ರ ಮೇ 19ರ ಚೈತ್ರಶುದ್ಧ ತ್ರಯೋದಶಿಯಂದು ಈಗಿನ ಪೀಠಾಧಿಪತಿ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿ ಪಟ್ಟಾಭಿಶಕ್ತರಾದರು. ಉಡುಪಿ ಜಿಲ್ಲೆ ವರಂಗದವರಾದ ಶ್ರೀಗಳು ಕನ್ನಡ, ಇಂಗ್ಲಿಷ್‌, ಹಿಂದಿ, ಸಂಸ್ಕೃತ ಮೊದಲಾದ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಇತಿಹಾಸ ಮತ್ತು ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀಗಳು, ಜೈನಾಗಮದಲ್ಲಿ ವಿಶೇಷ ಅಧ್ಯಯನ ಮಾಡಿ, ಕ್ಷೇತ್ರದಲ್ಲಿ ನಿರಂತರವಾಗಿ ಧರ್ಮಾಚರಣೆ ಮಾಡುತ್ತಿದ್ದಾರೆ. ನಾಲ್ಕನೇ ಮಹಾಮಸ್ತಕಾಭಿಷೇಕ ಮಹೋತ್ಸವದ ರೂವಾರಿಗಳಾದ ಶ್ರೀಗಳು, ಕ್ಷೇತ್ರದಲ್ಲಿ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ, ಧವಲತ್ರಯ ಗ್ರಂಥಗಳ ಕನ್ನಡಾನುವಾದ, ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳ ಆಸ್ಪತ್ರೆ, ಪ್ರತಿ ಮಹಾಮಸ್ತಕಾಭಿಷೇಕ ಮಹೋತ್ಸವದ ಸಂದರ್ಭದಲ್ಲಿ ಜನಕಲ್ಯಾಣ ಯೋಜನೆಗಳ ಮೂಲಕ ಉಚಿತ ಆರೋಗ್ಯ ತಪಾಸಣೆ ಮತ್ತು ಔಷಧಿ ವಿತರಣೆ, ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಬಸದಿಗಳ ಜೀರ್ಣೋದ್ಧಾರ, ಕ್ಷೇತ್ರದಲ್ಲಿ ಯಾತ್ರಿಕರಿಗೆ ವಸತಿ ಸಮುಚ್ಛಯದ ವ್ಯವಸ್ಥೆ, ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗೆ ಸಹಕಾರ, ಹೀಗೆ ಕ್ಷೇತ್ರದ ಸರ್ವೋತೋಮುಖ ಅಭಿವೃದ್ಧಿಗೆ 48 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಾ ಧರ್ಮೋನ್ನತಿ ಮತ್ತು ಕ್ಷೇತ್ರೋನ್ನತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ. ಪ್ರಧಾನಿ ಇಂದಿರಾ ಗಾಂಧಿ ನೀಡಿದ ಕರ್ಮಯೋಗಿ ಬಿರುದಿಗೆ ಅನ್ವರ್ಥರಾಗಿದ್ದು, ಕರ್ನಾಟಕ ಸರ್ಕಾರವು ನೀಡುವ 2017ರ ಮಹಾವೀರ ಶಾಂತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2018 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: