Today: 26.Apr.2018

ನನಗೆ ಮೈಯ್ಯುರಿ

ಮಂಡ್ಯದಲ್ಲಿ ಮನೆ ಮಾಡೋ ಮೇಡಂ ಕಂಡ್ರೆ ಮೈಯ್ಯುರಿ

06 Apr 2018 0 comment
(0 votes)
 

ಏಯ್ ಕುತ್ತೇ, ಸೀನಾ ನಹೀ ಸೀನಾ ಸಾಹೇಬ್ ಬೋಲೋ, ನನ್ ಮಾತಂದ್ರೆ ಮಾತು. ನಾ ಗುರಿಯಿಟ್ರೆ ಮುಗೀತು ಬಲೇಗ್ ಬೀಳ್ದೆ ಇರೋ ಮೀನೆ ಇಲ್ಲ ಅಂತ ಹಳ್ಳಿ ಕಟ್ಟೆ ಮೇಲ್ ಕುತ್ಕೊಂಡು ಹೈಕ್ಳು ಜತ್ಗೆ ಡೈಲಾಗ್ ಹೊಡೀತಿದ್ದ ಗುಡ್ದಳ್ಳಿ ಸೀನ. ಅತ್ಲ ಕಡೆ ಬಂದೋನೆ ಪಟೇಲಪ್ಪ, ಏನ್ಲಾ ಸೀನ, ಅರಳಿ ಕಟ್ಟೆ ಮ್ಯಾಲ್ ಕೂತ್ಕೊಂಡು ಅಂಬ್ರೀಷಣ್ಣನ್ ಡೈಲಾಗ್ ಹೋಡೀತಿದ್ಯಾ, ಏನ್ ಸಮಾಚಾರ? ಈ ಎಲೆಕ್ಷನ್‌ಗೆ ನಿಂತ್ಕಂತರಂತ ಹೆಂಗೆ ಅಂಬ್ರೀಷಣ್ಣ ಅಂದ ಪಟೇಲಪ್ಪ.

ಅಂಬ್ರೀಷಣ್ಣ ನಿಂತ್ಕೊಳ್ಳಕ್ ರೆಡಿಯಾಗ್ಯದೆ ಕಣ್ ದೊಡ್ಡಪ್ಪ, ಆದ್ರೆ, ಸಿದ್ರಾಮಣ್ಣ ಮತ್ತೇ ಲೀಡ್ರುಗೋಳು ಆ ಹುಡ್ಗಿ ಮಾತ್ ಕೇಳ್ಕಂಡು ನಂಗೆ ಟಿಕೆಟ್ ಕೊಡದ್ ಬ್ಯಾಡ ಅಂತ ತೀರ್ಮಾನ ಮಾಡ್ಯವ್ರೆ. ಅದುಕ್ಕೆ ನಾನು ಅವ್ರ ಹತ್ಕೆ ಹೋಗಾಕಿಲ್ಲ. ಅವ್ರೇ ಆಗಿ ಬರೋಗಂಟ ನಾ ಮಾತ್ರ ಬರಾಕಿಲ್ಲ ಅಂತ ಅವಾಜ್ ಬುಡ್ಕೊಂಡ್ ಮನೇಲೆ ಕುತ್ತೈತೆ ಅಂಬ್ರೀಷಣ್ಣ ಅಂದ ಸೀನ.

ಮೊನ್ನೆ ಏನೋ ಸಿದ್ರಾಮಣ್ಣಂಗೆ ಬೈದಾಕ್ಬುಟ್ಟುತ್ತಂತೆ ಸಿಟ್ಟು ಬಂದ್ರೆ ಆವಯ್ಯನತ್ರಾ ಮಾತಾಡಕ್ ಆಯ್ತದ್ಲಾ ಸೀನ, ಸಿದ್ರಾಮಣ್ಣನ್ನೂ ನೋಡಕ್ಕಿಲ್ಲ, ರಾಹುಲ್ ಗಾಂಧೀನೂ ನೋಡಾಕಿಲ್ಲ. ಅಂತ ಮನುಷ್ಯ ಆ ಪುಣ್ಯಾತ್ಮ. ಟಿಕೆಟ್ ಕೊಡ್ಲಿಲ್ಲಾಂದ್ರೆ ಅವ್ರ ಮಾನ ಹರಾಜಾಕ್ಬುಡ್ತದೆ ಕಣ್ ಬುಡು ಅಂದ ಪಟೇಲಪ್ಪ. ಅದಕೆ ಕಣ್ ದೊಡ್ಡಪ್ಪ ಸಿದ್ರಾಮಣ್ಣನ್ ಮಾತ್ ಕೇಳ್ನಿಲ್ಲ ಅಂದ್ಬುಟ್ಟು ವೇಣುಗೋಪಾಲ್ ಬುಟ್ಟವ್ರೆ. ಈಗ್ಲಾರ ಬಂದು ಎಲೆಕ್ಷನ್‌ಗೆ ನಿಂತ್ಕೋತೀರೋ ಇಲ್ವೋ ಹೇಳಿ. ಇಲ್ಲಾಂದ್ರೆ ನಾವು ಯಾವ್ದಾರ ಬ್ಯಾರೆ ಯವಸ್ಥೆ ಮಾಡ್ಕತ್ತೀವಿ ಅಂತ ಆ ವಯ್ಯಾ ಕೇಳ್ತಂತೆ. ಏನೋ ಜೋರಾಗ್ ಮಾತಾಡ್ತಿದ್ದೆ. ಅದಕೆ ನಾನೀಗ ಹೇಳಾಕಿಲ್ಲ. ನಾಳಿಕ್ಕೆ ಯೋಚ್ನೆ ಮಾಡಿ ಯೋಳ್ತೀನಿ ತಡಿ ಅಂತ ಟಾಂಗ್ ಕೊಟ್ಟೈತಂತೆ. ಅದಕೆ ಆ ವಯ್ಯನು ಇಯಪ್ಪನ್ ಸವಾಸನೇ ಅಲ್ಲ ಅಂತ ಸುಮ್ಕಾಗ್ಯದಂತೆ ಅಂದ ಸೀನ.

ಅದ್ಸರಿ ಅದೇನ್ಲಾ ಅಂಬ್ರೀಷಣ್ಣ ಹೇಳಿದ್ ಹುಡ್ಗಿ ವಿಷ್ಯ? ಶ್ಯಾನೆ ದಿನದಿಂದ ಅದೇ ಮ್ಯಾಟ್ರು ಹರಿದಾಡ್ತೈತೆ. ಆದ್ರೆ ಅದೇನು ಅಂತ ಹೊರಿಕ್ ಗೊತ್ತೇ ಆಗೊಲ್ದು ಅಂದ ಕುತೂಹಲದಿಂದ ಪಟೇಲಪ್ಪ. ನೀನ್ ಅಂನ್ಕಂಡಿರಂಗೆ ಬ್ಯಾರೇನು ಇಲ್ಲ ಕಣ್ ಅದು ನಮ್ ರಮ್ಯಾ ಮೇಡಂ ಮ್ಯಾಟ್ರು. ಅಂಕಲ್…ಅಂಕಲ್ ಅಂತಾ ಓಡಾಡ್ಕಂಡಿದ್ದು ಹೆಣ್ಮಗ, ಡೆಲ್ಲಿಗೋಗಿ ಸೆಟ್ಲಾದ್ ಮ್ಯಾಲೆ ಅಂಬ್ರೀಷಣ್ಣನ್ ಬುಡಕ್ಕೆ ಬತ್ತಿ ಇಟ್ಟೈತಂತೆ. ಅಂಕಲ್‌ಗೆ ವಯಸ್ಸಾಗ್ಯದೆ. ಅವ್ರಿಗ್ಯಾಕೆ ಟಿಕೆಟ್ ಕೊಡದು ಅಂತ ಯೋಳ್ಯದಂತೆ ಅನ್ನೋದು ಅಂಬ್ರೀಷಣ್ಣನ್ ಡೌಟು. ಅದಕ್ಕೆ ಆ ವಯ್ಯ ಶ್ಯಾನೆ ಸಿಟ್ಟಾಗ್ಬುಟ್ಟದೆ ಅಂದ ಸೀನ.

ಅದ್ಸರಿ, ಆ ಮ್ಯಾಡಮ್ನೋರು ಇತ್ತೀಚ್ಗೆ ಇಲ್ಲೆಲ್ಲೂ ಕಾಣ್ನೆ ಒಲ್ಲರಲ್ಲ. ಅದೆಂಗೆ ಹಿಂಗೆಲ್ಲ ಮಾಡ್ತಾರ್ಲಾ ಸೀನ. ನೋಡಕ್ಕೆ ಪಾಪುದ್ ಹುಡ್ಗಿ ತರಾ ಅಂಬ್ರೀಷಣ್ಣನ್ ಓಡಾಡ್ಕೊಂಡಿತ್ತು. ಹಿಂಗೆಲ್ಲ ಮಾಡ್ತೈತೆ ಅಂದ್ರೆ ನಂಗೆ ನಂಬೋಕೆ ಆಯ್ತಿಲ್ವಪ್ಪ ಅಂದ ಪಟೇಲಪ್ಪ. ಆ ವಮ್ಮ ಹಂಗೆ ಕಣ್ ದೊಡ್ಡಪ್ಪ, ಡೆಲ್ಲಿ ಕಂಡ್ಯಾಕ್ಟ್ ಬಂದ್ಮೇಲೆ ಎಲ್ರುನೂ ಮರ್ತೆ ಬುಟ್ಟದೆ. ಅದಕ್ಕೆ ಯಾರೂ ಬೇಕೆ ಆಗಿಲ್ವಂತೆ. ಬೇರೇರ್ ಇರ್ಲಿ, ಅಮ್ಮನ್ ಮಾತ್ನೇ ಕೇಳ್ತಾಯಿಲ್ಲ ಅಂತ ಒಂದ್ಸಾರಿ ಅವ್ರಮ್ಮ ಹೇಳಿದ್ ಕೇಳ್ನಿಲ್ವೇ? ಹಂಗಾಗ್ಯದೆ. ಲಾಸ್‌ಟ್ ಎಲೆಕ್ಷನ್ ಬಂದಾಗ ನಾನು ಬಂದು ಮಂಡ್ಯದಲ್ಲಿ ಮನೆ ಮಾಡ್ತೀನಿ ಅಂತ ಹೇಳಿದ್ ಮೇಡಂಮ್ನೋರ್ಗೆ ಜನ ಕಂಡ್ರೆ ಸಾಕು ಅದ್ಕೆ ಬೆಂಗ್ಳೂರಿಗ್ ಬಂದ್ರು ಯಾರ್ನೂ ಹತ್ರಕ್ಕೆ ಬುಟ್ಕಳ್ಳಕ್ಕಿಲ್ವಂತೆ. ಅದ್ರಲ್ಲೂ ಮೀಡಿಯಾದವ್ರ ಕಣ್ಗೂ ಕಾಣುಸ್ಕೊಳ್ಳಕ್ಕಿಲ್ವಂತೆ. ನಮ್ಗೆ ಸೋಷಿಯಲ್ ಮೀಡಿಯಾ ಸಾಕು ಅಂತೇಳಿ ಆಚೆಗ್ ಹಾಕ್ತದಂತೆ ಗೊತ್ತಾ ಅಂದ ಸೀನ.

ಅದೇನೋಪ್ಪಾ, ಆದ್ಯಾಕ್ ಹಂಗಾಯ್ತು ಆ ಹೆಣ್ಮಗ. ಪಾಪ ಅಂಬ್ರೀಷಣ್ಣ ಅದ್ರು ಕೈಲಾದ್ರೆ ನಿಂತ್ಕತ್ತದೆ. ಇಲ್ಲಾಂದ್ರೆ, ನಂಗಾಗಕಿಲ್ಲ ಯಾರ್ಗಾದ್ರೂ ಕೊಡಿರ್ಲಾ ಅಂದ್ಬುಟ್ಟು ಸುಮ್ಕಾಯ್ತದೆ. ಅದ್ರ ಮಧ್ಯೆ ಯಾಕ್ ಹಿಂಗೆ ಬತ್ತಿ ಇಟ್ಟು ಬೇಯಿಸ್ಬೇಕು ಅಂತೀನಿ. ಸ್ವಲ್ಪ ದಿನ ಕಾಯ್ದ್ರೆ ಆ ವಯ್ನೆ ಮ್ಯಾಡಂಗೆ ಯಾಕಿಷ್ಟು ಅರ್ಜೆಂಟೋ ಕಾಣೆ ಕಣೋಗು ಅಂದ್ಕೊಂಡು ಮನೆಕಡಿಗ್ ಹೊಂಟ ಪಟೇಲಪ್ಪ. ಅಬ್ರೀಷಣ್ಣನ್ ಡೈಲಾಗ್ ಹೇಳದ ಕಂಟ್ಯನ್ಯೂ ಮಾಡ್ದ ಸೀನ.

- ವೆಂಕಟೇಶ ಆರ್.ದಾಸ್ ಹಳ್ಳಿಕಟ್ಟೆ.

 

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: