Today: 26.Apr.2018

ಸೌದಿಯಲ್ಲಿ ರಾಹುಲ್ ಯಾತ್ರೆ

ಸೌದಿಯಲ್ಲಿ ಕಾಂಗ್ರೆಸ್ಸಿಗರ ಮತಬೇಟೆ :   ಗುಳೆ ಹೋಗಿರುವ ಮತದಾರರ ಓಲೈಕೆಗೆ ಯತ್ನ

09 Apr 2018 0 comment
(1 Vote)
 

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣಾ ಕಣ ದಿನಕಳೆದಂತೆ ರಂಗೇರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಕಾರ್ಯ ಮುಗಿಲು ಮುಟ್ಟುತ್ತಿದೆ. ಇತ್ತ ಆಡಳಿತಾ ರೂಢ ಕಾಂಗ್ರೆಸ್ ಪಕ್ಷ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿರುವ ಮತದಾರರು ಅಷ್ಟೇ ಅಲ್ಲದೇ ವಿದೇಶದಲ್ಲಿರುವ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ವಿದೇಶಕ್ಕೆ ತನ್ನ ಮುಖಂಡರನ್ನು ಪ್ರಚಾರಕ್ಕಾಗಿ ರವಾನೆ ಮಾಡಿದೆ.

ರಾಜ್ಯ ರಾಜಕೀಯ ಪಕ್ಷಗಳ ಪ್ರಚಾರ ದೇಶದ ಗಡಿಯನ್ನು ದಾಟಿ ವಿದೇಶಿ ನೆಲಕ್ಕೂ ವ್ಯಾಪಿಸಿರುವುದು ಈ ಬಾರಿಯ ವಿಧಾನಸಭಾ ಚುನಾವಣಾ ವಿಶೇಷವಾಗಿದೆ. ಹೈದರಾಬಾದ್‌ ಕರ್ನಾಟಕದ ಬಹುತೇಕ ಕ್ಷೇತ್ರಗಳ ಶಾಸಕರು, ತಮ್ಮ ಕ್ಷೇತ್ರಗಳಿಗಿಂತ ಹೆಚ್ಚಾಗಿ ಬೆಂಗಳೂರು, ಹೈದರಾಬಾದ್‌, ಪುಣೆ, ಮುಂಬೈನಂತಹ ಮಹಾನಗರಗಳಲ್ಲಿಯೇ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದ ಬಹುತೇಕ ಮತದಾರರು ಮಹಾನಗರಗಳಿಗೆ ಗುಳೆ ಹೋಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

ಇದೇ ಮಾದರಿಯಲ್ಲಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಮೊಹಿಯುದ್ದೀನ್‌ ಬಾವ, ಇದೀಗ ವಿದೇಶದಲ್ಲಿ ಚುನಾವಣಾ ಪ್ರಚಾರ ಆರಂಭಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಮೂಲಗಳ ಪ್ರಕಾರ ಮಂಗಳೂರು ಶಾಸಕ ಯು.ಟಿ.ಖಾದರ್‌, ಬಂಟ್ವಾಳ ಶಾಸಕ ಬಿ.ರಮಾನಾಥ ರೈ, ಕಾಪು ಶಾಸಕ ವಿನಯಕುಮಾರ್ ಸೊರಕೆ ಅವರೂ ಜೆಡ್ಡಾದಲ್ಲಿದ್ದು, ಅಲ್ಲಿಯೇ ಪಕ್ಷದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಕರಾವಳಿ ಭಾಗದ ಸಾಕಷ್ಟು ಜನರು ಸೌದಿ ಅರೇಬಿಯಾ, ಕುವೈತ್‌, ಬಹರೇನ್‌, ಕತಾರ್ ಮತ್ತು ದುಬೈನಲ್ಲಿ ಉದ್ಯೋಗ ಮಾಡುತ್ತಿದ್ದು, ಈ ನಾಲ್ವರೂ ಪ್ರತಿನಿಧಿಸುವ ಕ್ಷೇತ್ರಗಳ ಮಂದಿ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂತಹ ಮತದಾರರನ್ನು ಓಲೈಸಲು ಇದೀಗ ಪ್ರಯತ್ನ ನಡೆದಿದೆ. ಇದೇ ವಿಚಾರವಾಗಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಸೌದಿ ಅರೇಬಿಯಾದ ಜೆಡ್ಡಾದ ಇಂಪಾಲಾ ಗಾರ್ಡನ್‌ನಲ್ಲಿ ಇದೇ 6ರಂದು ಸಂಜೆ 4 ಗಂಟೆಗೆ ‘ಮತ್ತೊಮ್ಮೆ ಬಾವಾಕಾ’ ಎನ್ನುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಕುರಿತು ಬ್ಯಾನರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಈ ಬ್ಯಾನರ್‌ನಲ್ಲಿ ಕಾಂಗ್ರೆಸ್‌ ಪಕ್ಷದ ಚಿಹ್ನೆಯನ್ನೂ ಹಾಕಲಾಗಿದೆ. ಮೆಕ್ಕಾ ಪ್ರವಾಸದ ನೆಪದಲ್ಲಿ, ಸೌದಿ ಅರೇಬಿಯಾದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯನ್ನು ಶಾಸಕ ಬಾವ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಇಂಬು ನೀಡುವಂತೆ ಪ್ರಚಾರ ಸಭೆಯ ವಿಡಿಯೊ ತುಣುಕೊಂದು ಬಾವ ಅವರ ಫೇಸ್‌ಬುಕ್‌ ಪೇಜ್‌ನಲ್ಲಿ ಅಪ್‌ಲೋಡ್‌ ಆಗಿದೆ. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ, ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ ಅವರ ಭಾವಚಿತ್ರಗಳನ್ನು ಒಳಗೊಂಡ ಕಾಂಗ್ರೆಸ್‌ ಪಕ್ಷದ ಬೃಹತ್‌ ಬ್ಯಾನರ್‌, ಬಂಟಿಂಗ್ಸ್ ಗಳನ್ನು ಹಾಕಿರುವುದು ಸ್ಪಷ್ಟವಾಗಿದೆ.

-ಬ್ಯೂರೋ ನ್ಯೂಸ್, ಕೊಂಡಿನ್ಯೂಸ್.

Login to post comments

ನಮ್ಮನ್ನು ಸಂಪರ್ಕಿಸಿ

        : Netra Anand, Kuvempu Nagar,Hassan-573201
T     : +91 94838 76052  
M       : +91 92414 78179

ಹಕ್ಕುಸ್ವಾಮ್ಯ

ಸಂಪಾದಕರು ಮತ್ತು ಪ್ರಕಾಶಕರು| ನೇತ್ರಾ ಆನಂದ್ | ವಿನ್ಯಾಸ ಮತ್ತು ಪ್ರಸರಣ ಕೊಂಡಿನ್ಯೂಸ್©2017 | www.kondinews.com  | ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ವಿನ್ಯಾಸ: Sum-perk Multimedia  ಕೊಂಡಿ ಬೆಂಬಲಿಗರು: